Friday, 13 July 2012

ಚಕ್ಕುಲಿ


ಬೇಕಾಗುವ ಸಾಮಗ್ರಿಗಳು: 
  • ಅಕ್ಕಿ 1ಕಪ್ 
  • ಪುಟಾಣಿ ಬೇಳೆ 1/2ಕಪ್ 
  • ಉದ್ದಿನ ಬೇಳೆ  1/4ಕಪ್ 
  • ಉಪ್ಪು 
  • ಅರಿಶಿನ ಸ್ವಲ್ಪ 
  • ಓಮ ಕಾಳು 1-2tsp 
  • ಎಳ್ಳು 2tsp 
  • ಎಣ್ಣೆ ಕರಿಯಲು 
ಮಾಡುವ ವಿಧಾನ:
  • ಅಕ್ಕಿ,ಪುಟಾಣಿ,ಉದ್ದಿನ ಬೇಳೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
  • ಅಕ್ಕಿಯನ್ನು ಬೇರೆಯಾಗಿಯೇ ನುಣ್ಣಗೆ ಪುಡಿಮಾಡಿ.
  • ನಂತರ ಪುಟಾಣಿ,ಉದ್ದನ್ನು ನುಣ್ಣಗೆ ಪುಡಿಮಾಡಿ.
  • ಈಗ ಪುಡಿಮಾಡಿದ ಎಲ್ಲ ಹಿಟ್ಟು,ಓಮಕಾಳು,ಎಳ್ಳು,3tsp ಬಿಸಿ ಎಣ್ಣೆ,ಅರಶಿನ ಮತ್ತು ಉಪ್ಪನ್ನು ಒಂದು ಪಾತ್ರೆಗೆ ಹಾಕಿ,ಉಗುರು ಬೆಚ್ಚಗಿನ ನೀರಿನಿಂದ ಹಿಟ್ಟನ್ನು ಕಲಸಿ.
  • ಎಣ್ಣೆ ಬಿಸಿಗಿಡಿ.
  • ಚೆನ್ನಾಗಿ ನಾದಿ,ಚಕ್ಕುಲಿ ಮಟ್ಟಿನಲ್ಲಿ ಹಿಟ್ಟನ್ನು ತುಂಬಿ.
  • ಎಣ್ಣೆ ಬಿಸಿಬಂದ ನಂತರ,ಚಕ್ಲಿ ಮೆಟ್ಟಿನ ಸಹಾಯದಿಂದ ಚಕ್ಲಿ ಮಾಡಿ ಎಣ್ಣೆಯಲ್ಲಿಬಿಡಿ.
  • ನಿಮಗೆ ತಾಳ್ಮೆ ಇದೆ ಎಂದರೆ ಚಕ್ಕುಲಿಯ ನಿಜವಾದ ಆಕಾರಕೊಡಿ.ಇಲ್ಲವೆಂದರೆ ಹಾಗೇ ಮಾಡಿ.ರುಚಿ ಏನೂ ಬದಲಾಗುವದಿಲ್ಲ.
  • ಸಣ್ಣ ಉರಿಯಲ್ಲಿ ಕರಿಯಿರಿ.ಹೊಂಬಣ್ಣ ಬರುವ ತನಕ ಕರಿದು ತೆಗೆದು,ತಣ್ಣಗಾಗಲು ಬಿಡಿ.
  • ನಿಮ್ಮ ಜಗುಲಿಗೆ ಹೋಗಿ ಆರಾಮವಾಗಿ ಕೂತು,ನಿಮಗೆ ಯಾವ TV ಕಾರ್ಯಕ್ರಮ ಇಷ್ಟನೋ ನೋಡ್ತಾ ತಿನ್ನಿ.

Wednesday, 11 July 2012

ಕೊತ್ತಂಬರಿ ಜೀರಿಗೆ ಹಾಲು

ಒಣಕೆಮ್ಮಾದರೆ ಮೊದಲು ಮಾಡುವ "ಮನೆಮದ್ದು".ಇದನ್ನು ಒಂದು ವಾರ ಕುಡಿದರೆ ಕೆಮ್ಮು ಕಡಿಮೆ ಆಗೊತ್ತೆ ಅಂತ ಹೇಳುತ್ತಾರೆ.ಇದರಿಂದ ಯಾವುದೇ ತೊಂದರೆಯಾಗದು. ಕೆಮ್ಮೆ ಆಗ್ಬೇಕು ಅಂತೇನು ಇಲ್ಲ ಹೀಗೆ ಬೇಕಾದ್ರೂ ಮಾಡ್ಕೊಂಡು ಕುಡಿಬಹುದು.
ಬೇಕಾಗುವ ಸಾಮಗ್ರಿಗಳು:
  • ಕೊತ್ತಂಬರಿ ಬೀಜ 4ಚಮಚ 
  • ಜೀರಿಗೆ 2ಚಮಚ 
  • ಬೆಲ್ಲ ರುಚಿಗೆ 
  • ಹಾಲು 1ಕಪ್ 
  • ನೀರು 1/2ಕಪ್ 
ಮಾಡುವ ವಿಧಾನ:
  • ಬಿಸಿನೀರಿನಲ್ಲಿ ಕೊತ್ತಂಬರಿ ಮತ್ತು ಜೀರಿಗೆಯನ್ನು 1ಗಂಟೆ ನೆನೆಸಿ.
  • ನಂತರ ಸ್ವಲ್ಪ ನೀರಿನೊಂದಿಗೆ ನೆನೆಸಿದ ಸಾಮಗ್ರಿಗಳನ್ನು ರುಬ್ಬಿ.
  • ರುಬ್ಬಿರುವದನ್ನು ಶೋಧಿಸಿ,ಅದಕ್ಕೆ ಹಾಲು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕರಡಿ.
  • ಕೊತ್ತಂಬರಿ ಜೀರಿಗೆ ಹಾಲು ಕುಡಿಯಲು ಸಿದ್ಧ.

Monday, 9 July 2012

ಮೆಣಸಿನ ಮುಳ್ಕ

ನಮ್ಮ ಮನೆಯಲ್ಲಿ ಮೆಣಸಿನ ಮುಳ್ಕ ಸಾಧಾರಣವಾಗಿ ಮಾಡುತ್ತಿರುತ್ತಾರೆ. ಎಲ್ಲರಿಗೂ ಇಷ್ಟದ ಖಾದ್ಯ.ಆದರೆ ಅದಕ್ಕೆ ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ ಬಳಸಿ ಯಾವತ್ತು ಮಾಡಿರಲಿಲ್ಲ.ನಾನು ಮಾಡಿನೋಡಿದೆ.ರುಚಿ ಚೆನ್ನಾಗಿತ್ತು. ಮಾಡುವ ವಿಧಾನ ಕೆಳಗಿನಂತಿದೆ.


Click here for English
ಬೇಕಾಗುವ ಸಾಮಗ್ರಿಗಳು:
  • ಅಕ್ಕಿ 1ಕಪ್ 
  • ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ 1/2ಕಪ್ ಹೆಚ್ಚಿದ್ದು (optional)
  • ಜೀರಿಗೆ 1ಚಮಚ 
  • ಕೊತ್ತಂಬರಿ 1ಚಮಚ 
  • ಒಣಮೆಣಸು 4-5 
  • ಕರಿಬೇವು  ಸ್ವಲ್ಪ 
  • ಉಳ್ಳಾಗಡ್ಡೆ 1-2 ಸಣ್ಣಗೆ ಹೆಚ್ಚಿದ್ದು 
  • ಹಸಿಮೆಣಸು 1 ಹೆಚ್ಚಿದ್ದು 
  • ಕಾಯಿತುರಿ 2tsp 
  • ಎಣ್ಣೆ ಕರಿಯಲು 
  • ಉಪ್ಪು 
 
ಮಾಡುವ ವಿಧಾನ:
  • ಅಕ್ಕಿಯನ್ನು 2-3ಗಂಟೆ ನೆನೆಸಿ, ನಂತರ ಅಕ್ಕಿಯ ಜೊತೆ ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ, ಜೀರಿಗೆ, ಕೊತ್ತಂಬರಿ, ಒಣಮೆಣಸು ಮತ್ತು ಕರಿಬೇವು ಹಾಕಿ ರುಬ್ಬಿ.(ನೀರು ಬೇಕಾಗುವದಿಲ್ಲ ಕೆಮ್ಮುಂಡೆ ಹಣ್ಣಿನ ನೀರು ಸಾಕು.)
  • 1ಹುಟ್ಟು ರುಬ್ಬಿದ ಹಿಟ್ಟು ಮತ್ತು ಅದಕ್ಕೆ 1ಕಪ್ ನೀರು ಹಾಕಿ ಕುದಿಸಿ, ಕೈ ಬಿಡದೆ ಕರಡುತ್ತಿರಿ.ಹುಗ್ಗೆ ಆದ ನಂತರ,ತಣಿಯುವ ತನಕ ಕಾಯಿರಿ.
  • ಎಣ್ಣೆ ಬಿಸಿಗಿಡಿ.ರುಬ್ಬಿದ ಹಿಟ್ಟಿಗೆ,ಹುಗ್ಗೆ,ಉಪ್ಪು,ಹಸಿಮೆಣಸು,ಉಳ್ಳಾಗಡ್ಡೆ ಮತ್ತು ಕಾಯಿತುರಿ ಹಾಕಿ ಚೆನ್ನಾಗಿ ಕಲಸಿ.ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣ,ಪಕೋಡ ರೀತಿ ಬಿಡಿ.
  • ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವ ತನಕ ಕರಿಯಿರಿ.
  • ಬಿಸಿ ಇದ್ದಾಗಲೇ ತಿನ್ನಿ.
ಸಲಹೆ:
  • ಕೆಮ್ಮುಂಡೆ ಹಣ್ಣಿನ ಬದಲಾಗಿ ಮೊಗೆಕಾಯಿ,ಸೌತೆಕಾಯಿ ಕೂಡ ಬಳಸಬಹುದು.
  • ಇದರಿಂದ ಸಿಹಿ ಮುಳ್ಕವನ್ನೂ ಮಾಡಬಹುದು.